ಹೈಲೆಟ್ಸ್ :
ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ
ತನಿಖೆ ವೇಳೆ ಭಯಾನಕ ಅಂಶಗಳು ಹೊರಕ್ಕೆ
ಖಿಲಾಫತ್ ಸ್ಥಾಪಿಸಲು ಆರೋಪಿಗಳ ಸಂಚು
ಷರಿಯಾ ಕಾನೂನು ಜಾರಿ ಯತ್ನಿಸಿ ದುಷ್ಕೃತ್ಯಕ್ಕೆ ಸ್ಕೆಚ್
ಆರೋಪಿಗಳಿಂದ ಯಶಸ್ವಿಯಾಗಿ ನಡೆದಿದ್ದ ಟ್ರಯಲ್ ಬಾಂಬ್ ಬ್ಲಾಸ್ಟ್
ತುಂಗಾ ನದಿ ತೀರದ ಕೆಮ್ಮಣ್ಣುಗುಂಡಿ ಬಳಿ ಬಾಂಬ್ ಬ್ಲಾಸ್ಟ್
ಶಿವಮೊಗ್ಗ : ಶಂಕಿತ ಉಗ್ರರ ಬಂಧನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಲಕ್ಷ್ಮೀಪ್ರಸಾದ್ ತನಿಕೆ ವೇಳೆ ಸಿಕ್ಕ ಭಯಾನಕ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಕಳೆದ ಆಗಸ್ಟ್ ೧೫ರಂದು ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣಕ್ಕೆ ಸಂಭಂಧಿಸಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಾಗಿತ್ತು. ಆ ಪೈಕಿ ಓರ್ವ ಆರೋಪಿ ಜಬಿವುಲ್ಲಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಾಗಿತ್ತು. ಆತನಿಂದ ಸಿಕ್ಕ ಹೆಚ್ಚಿನ ಮಾಹಿತಿಯಡಿಯಲ್ಲಿ ದೊಡ್ಡಪೇಟೆ ಠಾಣೆಯಲ್ಲಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದಾಗ ಶಾರೀಖ್ ಎಂಬ ವ್ಯಕ್ತಿ ಜಬಿವುಲ್ಲಾನಿಗೆ ಪ್ರಚೋದನೆ ನೀಡಿದ್ದ ಎಂಬುದು ತಿಳಿದು ಬಂದಿದೆ. ಆನಂತರ ಶಾರೀಖ್‌ನ ಬಗ್ಗೆ ತನಿಖೆ ಕೈಗೊಂಡಾಗ ಆತನಿಗೆ ಮಾಜ್ ಹಾಗೂ ಯಾಸೀನ್ ಸಹಚರರಾಗಿದ್ದರು ಎಂಬುದು ಗೊತ್ತಾಗಿದೆ. ಬಳಿಕ ಯಾಸಿನ್‌ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಯಾಸಿನ್ ನೀಡಿದ ಮಾಹಿತಿ ಅನ್ವಯ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬಳಿಕ ಈ ಪ್ರಕರಣದಲ್ಲಿ ಶಾರೀಕ್ ಎಒನ್ ಆರೋಪಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದು ಮಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಓದುವಾಗಲೇ ಒಂದಾಗಿದ್ದ ಆರೋಪಿಗಳು
ಮಾಜ್ ಹಾಗೂ ಯಾಸೀನ್ ಪಿಯುಸಿ ಓದುವ ಸಂದರ್ಭದಲ್ಲಿಯೇ ಇಬ್ಬರು ಪರಿಚಯವಾಗಿದ್ದರು, ಆ ಸಂದರ್ಭದಲ್ಲಿ ಇಬ್ಬರು ಸಹ ಮಂಗಳೂರಿಗೆ ಹೋಗಿದ್ದರು. ಇವರಿಬ್ಬರು ಐಸಿಸ್‌ಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪಿ ಶಾರೀಕ್, ಮಾಜ್ ಹಾಗೂ ಯಾಸಿನ್ ಜೊತೆ ಮಾತನಾಡಿ ಅವರಿಗೆ ನಿಷೇಧಿತ ಸಂಘಟನೆಯ ವಿಚಾರವಾಗಿಯೇ ಮಾತನಾಡುತ್ತಿರುತ್ತಾನೆ. ಹಾಗೇನೆ, ಯಾಸಿನ್ ಮೊಬೈಲ್‌ಗೆ ಮುಸ್ಲಿಂ ಮೂಲಭೂತವಾದಕ್ಕೆ ಸಂಬಂಧಿಸಿದ ಪಿಡಿಎಫ್, ಪೈಲ್‌ಗಳು, ವಿಡಿಯೋ-ಆಡಿಯೋಗಳು ಮತ್ತು ಅವುಗಳ ಲಿಂಕ್‌ಗಳನ್ನು ವಿವಿಧ ಆಪ್‌ಗಳ ಮೂಲಕ ಕಳುಹಿಸುತ್ತಿದ್ದ. ಭಾರತ ದೇಶಕ್ಕೆ ಬ್ರಿಟಿಷರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ನಿಜವಾಗಲು ಸ್ವಾತಂತ್ರ್ಯ ಸಿಕ್ಕಿಲ್ಲ. ನಿಜವಾಗಲೂ ಸ್ವಾತಂತ್ರ್ಯ ಸಿಗಬೇಕು ಎಂದರೇ ಈ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಅಸ್ತಿತ್ವಕ್ಕೆ ಬರಬೇಕು , ಷರಿಯಾ ಕಾನೂನು ಇಲ್ಲಿ ಅನುಷ್ಟಾನ ಆಗಬೇಕು ಎಂಬ ವಿಚಾರ ಹೊಂದಿರುತ್ತಾರೆ. ಐಸಿಸ್ ಇದೇ ವಿಚಾರದಲ್ಲಿ ನಡೆಸಿದ ಕೃತ್ಯವನ್ನು ಗಮನಿಸಿ, ಅದೇ ರೀತಿ ನಾವು ಕೂಡ ಮಾಡಬೇಕು ಎಂದು ಷಡ್ಯಂತ್ರ ಮಾಡುತ್ತಾರೆ. ಸ್ಫೋಟಕಗಳ ತಯಾರಿ ವಿಡಿಯೋ, ತಲೆ ಕಡಿಯವ ವಿಡಿಯೋಗಳಂ ಉದ್ರಿಕ್ತ ವಿಡಿಯೋಗಳನ್ನು ನೋಡಿ ಅದೇ ರೀತಿಯಲ್ಲಿ ನಾವು ಮಾಡಬೇಕು ಎಂದು ಪ್ರಚೋದನೆಗೆ ಒಳಗಾಗಿ ಕೃತ್ಯಕ್ಕೆ ಇಳಿಯುತ್ತಾರೆ.
ತುಂಗಾ ನದಿ ದಡದ ಮೇಲೆ ನಡೆದಿದ್ದು ಟ್ರಯಲ್ ಬ್ಲಾಸ್ಟ್
ಐಸಿಸ್‌ನಿಂದ ಪ್ರಚೋದನೆಗೆ ಒಳಗಾದ ಶಂಕಿತರು ಬಾಂಬ್ ತಯಾರಿಗೆ ಮುಂದಾಗುತ್ತಾರೆ. ಇದಕ್ಕಾಗಿ ಯಾಸಿನ್‌ನನ್ನು ನಿಯೋಜಿಸುತ್ತಾರೆ. ಯಾಸಿನ್‌ಗೆ ಟೈಮರ್ ರಿಲೇ ಸರ್ಕಿಟ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿರುತ್ತದೆ. ಈತ ಎಲೆಕ್ಟ್ರಿಲ್ ಇಂಜಿನಿಯರ್ ಆಗಿದ್ದ ಕಾರಣಕ್ಕೆ ಬಾಂಬ್ ತಯಾರಿ ಈತನನ್ನು ನಿಯೋಜಿಸುತ್ತಾರೆ. ಅಲ್ಲದೆ ಆತ ಅಮೇಜಾನ್‌ನಿಂದ ಸರ್ಕಿಟ್‌ನ್ನು ಖರೀದಿ ಮಾಡುತ್ತಾನೆ. ಲೋಕಲ್‌ನಲ್ಲಿಯೇ ಸ್ಫೋಟಕಕ್ಕೆ ಬೇಕಾಗುವ ವಸ್ತುಗಳನ್ನು ಕಚ್ಚಾವಸ್ತುಗಳನ್ನು ಸಂಗ್ರಹಿಸಿದ್ದರು ಆರೋಪಿಗಳು ಬ್ಯಾಟರಿ, ಸ್ವಿಚ್, ವಯರ್, ಮ್ಯಾಚ್‌ಬಾಕ್ಸ್ ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಬಾಂಬ್ ತಯಾರಿಗೆ ಮುಂದಾಗುತ್ತಾರೆ. ಸ್ಥಳೀಯ ವಸ್ತುಗಳಿಂದಲೇ ಸ್ಫೋಟಕ ಸಿದ್ದಪಡಿಸಿಕೊಂಡು ತುಂಗಾನದಿ ತೀರದಲ್ಲಿ ಕೆಮ್ಮಣ್ಣುಗುಂಡಿ ಎಂಬಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಜಿಹಾದ್ ಮಾಡಲು ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ ಸ್ವಾಂತಂತ್ರ್ಯ ದಿನಾಚರಣೆ ನಂತರ ದಿನಗಳಲ್ಲಿ ಪ್ರಯೋಗಾರ್ಥವಾಗಿ ಬಾಂಬ್ ಸಿಡಿಸಿದ ಜಾಗದ ಪಕ್ಕದಲ್ಲಿಯೇ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ್ದಾರೆ. ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.
ಆರೋಪಿಗಳಿಂದ ಹಲವು ಸಾಕ್ಷ್ಯ ಸಾಮಗ್ರಿಗಳು ವಶಕ್ಕೆ
ಮೂವರು ಆರೋಪಿಗಳ ಹಾಗೂ ಅವರ ಸಂಬಂಧಿಕರ ಮನೆಗಳು ಸೇರಿದಂತೆ ಶಿವಮೊಗ್ಗ, ಮಂಗಳೂರು ಹಾಗು ತೀರ್ಥಹಳ್ಳಿಯಲ್ಲಿ ಒಟ್ಟು ೧೧ ಕಡೆ ಕಾಲದಲ್ಲಿ ದಾಳಿ ಮಾಡಿದ್ದರು. ದಾಳಿ ವೇಲೇ ಹಲವು ಸಾಕ್ಷಿಗಳನ್ನು ಪೊಲೀಸರು ವಶಪಡಿಸಿಕೊಂಡರು. ೧೪ ಮೊಬೈಲ್, ೧ ಡಾಂಗಲ್, ೨ ಲ್ಯಾಪ್‌ಟಾಪ್‌ಗಳು, ೧ ಪೆನ್‌ಡ್ರೈವ್, ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು, ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬ್‌ನ ಆವಶೇಷಗಳು, ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳು, ರಿಲೆ ಸರ್ಕಿಟ್, ಬಲ್ಬಗಳು,ಮ್ಯಾಚ್ ಬಾಕ್ಸ್‌ಗಳು, ವೈರ್‌ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು ಅರೆಬರೆ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ಧ್ವಜ, ಪ್ರಮುಖ ದಸ್ತಾವೇಜುಗಳು ಮತ್ತು ದಾಖಲಾತಿಗಳು, ಆರೋಪಿತ ಶಾರೀಕ್ ಕೃತ್ಯಕ್ಕೆ ಬಳಸಿದ್ದ ಮಾರುತಿ ರಿಡ್ಜ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.