ಹೈಲೆಟ್ಸ್:
ಮೂಗುತಿ, ಓಲೆಗಾಗಿ ವೃದ್ಧ ಭಿಕ್ಷುಕಿ ಹತ್ಯೆ
ದೇಗುಲದ ಆವರಣದಲ್ಲಿ ನಡೆದಿದ್ದ ಕೃತ್ಯ
ಕುಂದಾಪುರ ಸಮೀಪದ ಆರೋಪಿ ಬಂಧನ
ಆರೋಪಿಯಿಂದ ೧೪ ಸಾವಿರದ ಆಭರಣ ವಶ
ಶಿವಮೊಗ್ಗ:
ಬಂಗಾರದ ಕಿವಿ, ಓಲೆ ಮತ್ತು ಮೂಗುತಿಗಾಗಿ ವೃದ್ಧೆಯ ಕೊಲೆ ಮಾಡಿದ ಆರೋಪಿಯನ್ನು ಭದ್ರಾವತಿ ಪೋಲಿಸರು ಬಂಧಿಸಿದ್ದಾರೆ. ಆರೋಪಿಯಿಂದ ೧೪ ಸಾವಿರ ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಮೂಗುತಿಯನ್ನು ಜಪ್ತಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ದುಗ್ಗದಮನೆ ನಿವಾಸಿ ಕರುಣಾಕರ ದೇವಾಡಿಗ ಬಂಧಿತ ಆರೋಪಿ. ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದಹಳ್ಳಿ ಗ್ರಾಮದ ವಾಸಿಯಾದ ಶಂಕ್ರಮ್ಮ ಮೃತರಾದವರು. ಇವರು ಸುಣ್ಣದಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದ ಬೇಡಿ ಹಣ ಪಡೆದು, ಜೀವನ ಸಾಗಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ದೇವಸ್ಥಾನದ ಎದುರು ಇರುವ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್‌ನ ಒಳಭಾಗ ಮಲಗುತ್ತಿದ್ದರು.
ಯಾರೋ ಅಪರಿಚಿತರು ಶಂಕ್ರಮ್ಮರವರನ್ನು ಕೊಲೆ ಮಾಡಿ ಅವರ ಎರಡೂ ಕಿವಿಯಲ್ಲಿದ್ದ ಚಿನ್ನದ ಓಲೆಗಳು ಮತ್ತು ಮೂಗುಬೊಟ್ಟನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಮೃತೆಯ ಮೊಮ್ಮಗಳು ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದರಿ ಪ್ರಕರಣದ ಆರೋಪಿ ಪತ್ತೆಗಾಗಿ ಭದ್ರಾವತಿ ಪಿಎಸ್‌ಐ ಜಿತೇಂದ್ರಕುಮಾರ ದಯಾಮರವರ ಮೇಲ್ವಿಚಾರಣೆಯಲ್ಲಿ ಪೇಪರ್ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕರುಣಾಕರ ದೇವಾಡಿಗನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.