ಶಿವಮೊಗ್ಗ : ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾನಾಯಕ ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗದೆ. ಜಯಂತಿ ಅಂಗವಾಗಿ ರಕ್ತದಾನ ಶಿಬಿರ, ಮೆರವಣಿಗೆ, ಸಾಧಕರಿಗೆ ಸನ್ಮಾನ ಹಾಗೂ ಗಿಡ ನಡುವ ಮೂಲಕ ಹೀಗೆ ವಿಶೇಷವಾಗಿ ಅಂಬೇಡ್ಕರ್ ಜಯಂತಿ ಆಚರಿಸಲಾಗಿದೆ.
ಗಿಡ ನೆಟ್ಟು ಅಂಬೇಡ್ಕರ್ ಜಯಂತಿ ಆಚರಣೆ
ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥ ಸಂಘದಿಂದ ಗಿಡ ನಡೆವ ಮೂಲಕ ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗಿದೆ. ಸಂಘದ ಒಕ್ಕೂಟ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಜಿಲ್ಲಾ ಬೀದಿ ಬದಿ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಅಂಬೇಡ್ಕರ್ ದೀನ ದಲಿತರ ಪರವಾಗಿ ಹೋರಾಡಿದವರು. ಅಂಥವರ ಜಯಂತಿಯನ್ನು ಕೇವಲ ಫೋಟೋಗೆ ಹಾರ ಹಾಕಿ ಭಾಷಣ ಮಾಡಿ ಮುಗಿಸಬಾರದು. ಇಂಥಹ ದಿನಳಲ್ಲಿ ಕೆಲ ಸಮಾಜಮುಖಿ ಕೆಲವನ್ನು ಮಾಡಬೇಕು ಎಂದರು. ವೇದಿಕೆ ಕಾರ್ಯಕ್ರಮದ ಬಳಿಕ ಸುವರ್ಣ ಸಂಸ್ಕೃತಿ ಭವನಕ್ಕೆ ಹೋಗುವ ಮಾರ್ಗದಲ್ಲಿ ಗಿಡ ನೆಡಲಾಗಿದೆ.
ಅಂಬೇಡ್ಕರ್ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಕಾಸ ಟ್ರಸ್ಟ್ ವತಿಯಿಂದ ಮಧುಕೃಪದಲ್ಲಿ ರಕ್ತದಾನ ಶಿಬಿರ ನಡೆಯಿತು. ಅಂಬೇಡ್ಕರ್ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿಕಾಸ ಟ್ರಸ್ಟ್ ಅಧ್ಯಕ್ಷ ಧನಂಜಯ್ ಸರ್ಜಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಇದಾದ ಬಳಿಕ ಹಿಂದೂ ಸಮಾಜಕ್ಕೆ ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಏನು ಎಂಬ ವಿಚಾರ ಕುರಿತು ಉಪನ್ಯಾಸ ಕಾರ್ಯಕ್ರಮ ಕೂಡ ನಡೆಯಿತು. ಪ್ರೊ.ಷಣ್ಮುಖ ಈ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು. ಈ ವೇಳೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕ ಬಿ.ಎ.ರಂಗನಾಥ್, ದಿನೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸೊರಬದಲ್ಲಿ ಅಂಬೇಡ್ಕರ್ ಜಯಂತಿ
ಸೊರಬ ಬಿಜೆಪಿ ವತಿಯಿಂದ ಉದ್ರಿ ಗ್ರಾಮದಲ್ಲಿ ಅಂಬೇಡ್ಕರ್ ಅವರ ೧೩೧ ನೇ ಜಯಂತಿ ಆಚರಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ.ವೈ.ರಾಘವೇಂದ್ರ ನೆರವೇರಿಸಿಕೊಟ್ಟು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಸ್‌ಸಿ ಸಮಾಜದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಿದರು. ಈ ವೇಳೆ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ಅಂಬೆಡ್ಕರ್ ಅವರ ಜೀವನವೇ ನಮಗೆಲ್ಲಾ ಆದರ್ಶ, ಬಾಬಾ ಸಾಹೇಬರ ತತ್ವಗಳನ್ನು ನಾವೆಲ್ಲರು ಪಾಲಿಸೋಣ ಎಂದರು. ಈ ವೇಳೆ ವೇದಿಕೆಯಲ್ಲಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕಡಸೂರ್ ಶಿವಕುಮಾರ್ ಹಾಗೂ ಮತ್ತಿತರರು ಹಾಜರಿದ್ದರು.
ಸಹ್ಯಾದ್ರಿ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ
ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಹಾದ್ರಿ ಕಲಾ ಕಾಲೇಜಿನಲ್ಲಿ ಆಚರಿಸಲಾಗಿದೆ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಡಿಎಸ್‌ಎಸ್ ಗುರುಮೂರ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಬಿ.ಧನಂಜಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೊನ್ನಾಳಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಹೊನ್ನಾಳಿ ತಾಲೂಕು ಆಡಳಿತದ ವತಿಯಿಂದ ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಈ ಹಿನ್ನೆಲೆ ಬಾಬಾ ಸಾಹೇಬರ ಭಾವಚಿತ್ರದ ಮೆರವಣಿಗೆ ಕೂಡ ಮಾಡಲಾಗಿದೆ. ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ವತಃ ತಾವೇ ಮೆರವಣಿಗೆಯ ಟ್ಯಾಕ್ಟರ್ ಡ್ರೈವ್ ಮಾಡುವ ಮೂಲಕ ಮಿಂಚಿದ್ದಾರೆ. ಮೆರವಣಿಗೆಯಿಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.