ಧರ್ಮಸ್ಥಳ : ಮರಳು ಲಾರಿ ಮಾಲೀಕರಿಂದ ಕಮಿಷನ್ ಪಡೆದ ಆರೋಪ ಪ್ರಕರಣ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತಲುಪಿದೆ. ಬೆಳ್ಳಂ ಬೆಳಗ್ಗೆಯೇ ಧರ್ಮಸ್ಥಳಕ್ಕೆ ತೆರಳಿದ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರ್ ಗೈರು ಹಾಜರಿಯಲ್ಲಿಯೇ ಆಣೆ, ಪ್ರಮಾಣ ಮಾಡಿದರು.
ನಾನು ಲಾರಿ ಮಾಲೀಕರಿಂದ ಯಾವುದೇ ಹಣವನ್ನು ಪಡೆದಿಲ್ಲ ಎಂದು ಹರತಾಳು ಹಾಲಪ್ಪ ಪ್ರಮಾಣ ಮಾಡಿದರು. ಬಳಿಕ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಈ ಕುರಿತು ಮಾತಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು, ಗೋಪಾಲಕೃಷ್ಣ ಬೇಳೂರ್ ವಿರುದ್ಧ ವಾಗ್ದಾಳಿ ನಡೆಸಿದ್ರು. ವಿನಾಯಕ್ ಭಟ್ ಸಹ ಜೊತೆಗೆ ಬಂದು ಆಣೆ, ಪ್ರಮಾಣ ಮಾಡಿದ್ದಾರೆ. ನಾವ್ಯಾರು ಯಾರೂ ಹಣ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಿದ್ದೇವೆ ಎಂದು ಹರತಾಳು ಹಾಲಪ್ಪ ಸ್ಪಷ್ಟಪಡಿಸಿದರು.
ಇತ್ತ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರ್ ಸಹ ಧರ್ಮಸ್ಥಳಕ್ಕೆ ಬಂದರು. ನಾವು ಬೆಳಗ್ಗೆ ೧೦ ರಿಂದ ೧೨ ಗಂಟೆ ಅಂತ ಹೇಳಿದ್ವಿ. ಮೊದಲೇ ಬಂದು ಹೋದ್ರೆ ಹೇಗೆ ಎಂದು ಕಿಡಿಕಾರಿದರು. ಕೆಲ ಕಾಲ ಕಾದು, ಶಾಸಕ ಹರತಾಳು ಹಾಲಪ್ಪ ಇಲ್ಲೇ ಇದ್ದರೆ, ಧರ್ಮಸ್ಥಳಕ್ಕೆ ಬರಲಿ ಒಟ್ಟೆಗೆ ಪ್ರಮಾಣ ಮಾಡೋಣ, ಮಧ್ಯಾಹ್ನ ೧೨ ಗಂಟೆಯ ವರೆಗೆ ಕಾಯುತ್ತೇನೆ ಎಂದ್ರು. ಕೊನೆಗೆ ಮಂಜುನಾಥನ ಸನ್ನಿಧಿಗೆ ತೆರಳಿ ಆಣೆ, ಪ್ರಮಾಣ ಮಾಡಿದ್ದಾರೆ.