ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ವಿಭಾಗಗಳಿಗೆ ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಪ್ರವೇಶ ಪಡೆದುಕೊಂಡರು.
ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ, ಚಿಕ್ಕಮಗಳೂರು ಪಿಜಿ ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ ವಿಭಾಗಗಳಿಗೆ ಡಿಸೆಂಬರ್ 27, 28, ಮತ್ತು 29ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಮೊದಲ ದಿನವಾದ ಸೋಮವಾರದಂದು ಮೆರಿಟ್ ಸೀಟುಗಳಿಗೆ ಪ್ರವೇಶಾತಿ ಪ್ರಕ್ರಿಯೆ ಯಾವುದೇ ತೊಡಕುಗಳಿಲ್ಲದೆ ನಡೆಯಿತು. 28 ಹಾಗೂ 29ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಪ್ರಕಾರ ಶುಕ್ರವಾರ ಸಂಜೆ 4 ಗಂಟೆಯ ಹೊತ್ತಿಗೆ ಸ್ನಾತಕೋತ್ತರ ವಿಭಾಗಗಳ ಶೇ.65ರಷ್ಟು ಸೀಟುಗಳು ಭರ್ತಿಯಾಗಿದ್ದವು ಹಾಗೂ ಕೋವಿಡ್ ಕಾರಣದಿಂದಾಗಿ ಇನ್ನುಳಿದ ಆಕಾಂಕ್ಷಿಗಳು ಮಂಗಳವಾರ ಮತ್ತು ಬುಧವಾರ ವಿವಿಗೆ ಆಗಮಿಸಿ ಪ್ರವೇಶ ಪಡೆಯಲಿದ್ದಾರೆ.
ಪ್ರವೇಶಾತಿ ಪಡೆದ ಕೋರ್ಸುಗಳ ದಾಖಲಾತಿ ನಿರ್ವಹಣೆ ಹಾಗೂ ಶುಲ್ಕವನ್ನು ಭರಿಸಲು ವಿದ್ಯಾರ್ಥಿಗಳಿಗೆ ಸುಲಭ ಮಾದರಿಗಳಲ್ಲಿ ಅವಕಾಶಗಳನ್ನು ನೀಡಲಾಗಿತ್ತು. ಆಫ್‌ಲೈನ್‌ನಲ್ಲಿ ಶುಲ್ಕ ಭರಿಸುವವರ ಸಂಖ್ಯೆ ಹೆಚ್ಚಾದಂತೆ ಬ್ಯಾಂಕಿನಲ್ಲಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಹೆಚ್ಚುವರಿಯಾಗಿ ವಿವಿಯ ಆಡಳಿತ ಭವನದ ಹಣಕಾಸು ವಿಭಾಗದಲ್ಲಿ ಮತ್ತೆ ಮೂರು ಕೌಂಟರ್‌ಗಳನ್ನು ತೆರೆದು ಶುಲ್ಕ ಭರಿಸುವ ಪ್ರಕ್ರಿಯೆಯನ್ನು ಸುಲಲಿತಗೊಳಿಸಲಾಗಿತ್ತು. ಕೋವಿಡ್-19 ಮಾರ್ಗದರ್ಶಿ ಸೂತ್ರಗಳೊಂದಿಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಸುರಕ್ಷಿತವಾಗಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.