ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯವು ಪರೀಕ್ಷೆ ನಡೆಸದೆ ಫಲಿತಾಂಶ ನೀಡಿದ ಪ್ರಕರಣವು ಕುಲಪತಿ ಮತ್ತು ಕುಲಸಚಿವರ ನಡುವೆ ಅಧಿಕಾರ ಸಂಘರ್ಷಕ್ಕೆ ಕಾರಣವಾಗಿದೆ.
ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನು ಬದಲಿಸಿ ಕುಲಸಚಿವೆ ಅನುರಾಧ ಫೆಬ್ರವರಿ 14ರಂದು ಹೊರಡಿಸಿದ್ದ ಆದೇಶವನ್ನು ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಅವರು ಫೆಬ್ರವರಿ 17ರಂದು ರದ್ದುಗೊಳಿಸಿದ್ದಾರೆ. ಇದರಿಂದ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಆಡಳಿತಾತ್ಮಕ ಸಂಘರ್ಷ ಏರ್ಪಟ್ಟಿದೆ. ಕುಲಪತಿಗಳ ಅಧಿಸೂಚನೆ ಬಳಿಕವೂ ಈ ಹಿಂದೆ ನಿರ್ದೇಶಕರಾಗಿದ್ದ ಪ್ರೊ. ಎಸ್.ಎನ್.ಯೋಗೀಶ್, ಪ್ರೊ. ಬಿರಾದಾರ ಅವರಿಗೆ ಅಧಿಕಾರ ವಹಿಸಿಕೊಡಲು ನಿರಾಕರಿಸಿದ್ದಾರೆ.
ಇದರ ಮಧ್ಯೆ ಕುಲಸಚಿವರು ಅಧಿಕಾರ ಬದಲಾದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿದರೆ ಕುಲಪತಿಗಳು ಕುಲಸಚಿವರ ಆದೇಶವನ್ನೇ ರದ್ದುಗೊಳಿಸಿದ್ದಾರೆ. ಈ ಗೊಂದಲಗಳ ನಡುವೆ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಎರಡು ದಿನಗಳಿಂದ ಇಬ್ಬರು ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತಾಗಿದೆ. ಈ ಗೊಂದಲಗಳ ಬಗ್ಗೆ ಸಿಂಡಿಕೇಟ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಂಡಿಕೇಟ್ ವಿರೋಧದ ನಡುವೆಯೂ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿದ ಪ್ರಕರಣ ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿನ ಗೊಂದಲಗಳಿಗೆ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರೇ ಕಾರಣವೆಂದು ಆಪಾದಿಸಿದ್ದಾರೆ.