ತೀರ್ಥಹಳ್ಳಿ : ಸಮೀಪದ ಶಿಂಗನಬಿದರೆ, ತಳಲೆ, ಕೀಗಡಿ ಮತ್ತು ಮಂಡಗದ್ದೆ ಗ್ರಾಮಗಳ ಸುತ್ತಮುತ್ತಲಿನ ತೋಟಗಳಲ್ಲಿ ಆನೆಗಳ ಹಾವಳಿಯಿಂದಾಗಿ ರೈತರು ಬೆಳೆದ ಅಡಿಕೆ ಗಿಡಗಳು ಹಾನಿಗೊಳಗಾಗಿದ್ದು, ಅದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗಜ್ಞಾನೇಂದ್ರ ಅವರು ಹೇಳಿದರು.
ಆನೆಗಳಿಂದ ಹಾನಿಗೊಳಗಾದ ಕೀಗಡಿ ಗ್ರಾಮದ ರೈತರ ತೋಟಕ್ಕೆ ಅರಣ್ಯಾಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು, ಈಗಾಗಲೇ ಆನೆಗಳನ್ನು ಅರಣ್ಯಕ್ಕೆ ಹಿಂದಿರುಗಿಸಲು ಅರಣ್ಯಾಧಿಕಾರಿಗಳು ಕಳೆದ 2ವಾರಗಳಿಂದ ಕಾರ್ಯಾಚರಣೆ ನಡೆಸಿದ್ದಾರೆ. ಆನೆಗಳ ಬರದಂತೆ ಕಂದಕ ನಿರ್ಮಿಸಲು ೨೯ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರದಲ್ಲಿ ಕಂದಕ ನಿರ್ಮಾಣಕಾರ್ಯ ಆರಂಭಗೊಳ್ಳಲಿದೆ. ಇದರಿಂದಾಗಿ ಆನೆಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಆನೆಗಳ ಹಾವಳಿಯಿಂದ ಹಾನಿಗೊಳಗಾದ ಜಮೀನುಗಳ 16 ರೈತರು ಪರಿಹಾರಧನ ನೀಡುವಂತೆ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಪರಿಹಾರಧನ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿ.ಎಫ್.ಓ. ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ಟಿ.ವೈ.ಅಕ್ಷತಾ, ಆದರ್ಶ, ಪ್ರಕಾಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ರೈತರು ಉಪಸ್ಥಿತರಿದ್ದರು.