ಶಿವಮೊಗ್ಗ ಜಿಲ್ಲೆಯಾದ್ಯಂತ ಅದ್ದೂರಿ ನಾಗಪಂಚಮಿ

ಶಿವಮೊಗ್ಗ : ನಗರದ ಹಲವೆಡೆ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗಿದೆ. ಭಕ್ತರು ನಾಗ ದೇವರನ್ನು ಪೂಜಿಸುವುದರೊಂದಿಗೆ ಹಾಲಿನ ಅಭಿಷೇಕವನ್ನು ಮಾಡಿದ್ರು. ವಿವಿಧ ರೀತಿಯ ನೈವೇದ್ಯಗಳನ್ನು ಅರ್ಪಿಸಿದ್ರು. ಇದರಿಂದ ದೇವರು ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವುದು ನಂಬಿಕೆ. ಅಂದ್ಹಾಗೆ ನಾಗರ ಪಂಚಮಿ ಹಬ್ಬವು ಪ್ರತೀ ವರ್ಷವು ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಪಂಚಾಂಗದ ಪ್ರಕಾರ, ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. 


ಸಾಗರದಲ್ಲಿ ಹಬ್ಬದ ಸಡಗರ ಜೋರಾಗಿದೆ

ಸಾಗರ : ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸಾಗರ ತಾಲ್ಲೂಕಿನಲ್ಲಿ ಪಂಚಮಿ ಹಬ್ಬದ ಸಡಗರ ಜೋರಾಗಿಯೇ ಇದೆ. ಸಾಗರದ ೮ನೇ ವಾರ್ಡ್ ಶ್ರೀನಗರದಲ್ಲಿ ಭಕ್ತರು ನಾಗರ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲು ಎರೆಯುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ರು. ಅದೇ ರೀತಿ ಸಾಗರ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಮನೆ-ಮನೆಗಳಲ್ಲಿ ಬೆಳಗ್ಗೆಯಿಂದ ತರಹೇವಾರಿ ಹಬ್ಬದ ಅಡುಗೆಯ ಸಿದ್ಧತೆ ಜೋರಾಗಿದೆ. ಭಕ್ತರು ನಾಗದೇವತೆ ದೇವಸ್ಥಾನ, ಕಲ್ಲುನಾಗರಮೂರ್ತಿ, ಹುತ್ತಗಳಿರುವ ಪ್ರದೇಶಗಳಿಗೆ ತೆರಳಿ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದ್ರು.

ನಾಗರ ಪಂಚಮಿ ಹಬ್ಬದ ಹಿನ್ನೆಲೆ ಕೆಎಸ್‌ಈ ವಿಶೇಷ ಪೂಜೆ

ಶಿವಮೊಗ್ಗ : ನಾಗರ ಪಂಚಮಿ ಹಬ್ಬದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ಸಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿದ್ದ ಈಶ್ವರಪ್ಪ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ಅವರು, ಸುತ್ತಮುತ್ತಲಿನ ಜನರು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಪಂಚಮಿ ಹಬ್ಬದ ಪ್ರಯುಕ್ತ ನಡೆಯುವ ಪೂಜೆಗೆ ಇಲ್ಲಿನ ಆಡಳಿತ ಮಂಡಳಿಯವರು ನನ್ನನ್ನು ಆಹ್ವಾನಿಸಿದ್ರು. ಹೀಗಾಗಿ ಕುಟುಂಬ ಸಮೇತರಾಗಿ ಪೂಜೆಗೆ ಬಂದಿದ್ದೇನೆ ಎಂದ್ರು.