ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ದೇಶದ್ರೋಹ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ವಿಧಾನಸಭಾ ಅಧಿವೇಶದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಈ ಕುರಿತು ಸದನದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಫೆಬ್ರವರಿ ೯ರಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ದೆಹಲಿ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಈವರೆಗೂ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿಲ್ಲ. ನನ್ನ ಪ್ರಕಾರ, ಮುಖ್ಯಮಂತ್ರಿಗಳು ಮಂತ್ರಿ ಮಂಡಲದಿಂದ ಅವರನ್ನ ವಜಾ ಮಾಡಬೇಕಿತ್ತು. ಒಬ್ಬ ಮಂತ್ರಿ ಈ ರೀತಿಯ ಹೇಳಿಕೆಯನ್ನ ನೀಡುರುವುದರಿಂದ ಅವರು ಮಂತ್ರಿ ಸ್ಥಾನದಲ್ಲಿ ಮುದುವರೆಯಲು ಅನರ್ಹರು ಎಂದರು. ಸಿದ್ದರಾಮಯ್ಯನವರ ಮಾತಿಗೆ ಆಡಳಿತ ಪಕ್ಷದವರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಅಧಿವೇಶನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.