ಇಂದಿನ ಸ್ಥಳೀಯ ಪ್ರಮುಖ ಅಪರಾಧ ಸುದ್ದಿಗಳು

ಗಾಂಜಾ ಸಾಗಾಟ, ಕೊಲೆ ಸುಪಾರಿ ಸಂಚು ಪ್ರಕರಣದಲ್ಲಿ ಡಿಆರ್ ಪೊಲೀಸ್ ಬಂಧನ

ಶಿವಮೊಗ್ಗ : ಬೆಲೀನೆ ಎದ್ದು ಹೊಲ ಮೇದ ಹಾಗೆ ಗಾಂಜಾ ಸಾಗಾಟ ಹಾಗೂ ಕೊಲೆ ಸುಪಾರಿಗೆ ಸಂಚು ರೂಪಿಸಿದ ಪೊಲೀಸ್ಸೇ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು ಖಾಸಗಿ ಬಸ್ ಒಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ರು. ಈ ವೇಳೆ ದಾಳಿ ಮಾಡಿದ ಪೊಲೀಸರು ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ವೇಳೆ ೨ ಕೆಜಿ ೩೦೦ ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು, ಕೇರಳ ಮೂಲದ ಅಜೀನನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ನಂತರ ಫುಲ್ ಶಾಕ್ ಆಗಿದ್ದಾರೆ. ಡಿಆರ್‌ನಲ್ಲಿ ಕೆಲಸ ಮಾಡ್ತಾಯಿದ್ದ ವಿಲ್ಸನ್ ಎಂಬುವವನೇ ಗಾಂಜಾ ಸಾಗಾಟದ ಕಿಂಗ್ ಪಿನ್ ಎಂದು ಗೊತ್ತಾಗಿದೆ. ಬಳಿಕ ಆತನ ತನಿಖೆ ನಡೆಸಿದಾಗ ಚರ್ಚ್ ಒಂದರ ವಿಚಾರಕ್ಕೆ ಕೊಲೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.

ವೈರಲ್ ಆಗಿರುವ ವಿದ್ಯಾರ್ಥಿಗಳ ನಶಾ ವಿಡಿಯೋ

ಶಿವಮೊಗ್ಗ : ಭಾನುವಾರ ರಾತ್ರಿಯಂದಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಎಲ್ಲ ಕಡೆ ಹರಿದಾಡ್ತಾಯಿದೆ. ಕಾಲೇಜೊಂದರ ವಿದ್ಯಾರ್ಥಿಗಳು ನಶಾ ಗುಂಗಿನಲ್ಲಿ ತೇಲಾಡ್ತಾಯಿರುವ ವಿಡಿಯೋ ಎಲ್ಲೆಡೆ ಶೇರ್ ಆಗಿದೆ. ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್ ಸೇವಿಸಿದ್ದಾರೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಲಕ್ಷ್ಮೀಪ್ರಸಾದ್, ಆ ಹುಡುಗರು ಕಾಲೇಜು ಸಮೀಪದಲ್ಲಿನ ಬಾರ್ ಒಂದಕ್ಕೆ ತೆರಳಿ ಮದ್ಯ ಸೇವಿಸಿದ್ದಾರೆ. ಬಳಿಕ ಬಸ್ ಹತ್ತಲು ಕಾಲೇಜು ಬಳಿ ಬಂದಾಗ ಈ ಘಟನೆ ನಡೆದಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದರು. ಇನ್ನು ಇದೇ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿದ್ಯಾರ್ಥಿಗಳು ಸಣ್ಣವರಾಗಿದ್ರೆ ಹೊಡೆದು ಹೇಳಬಹುದಿತ್ತು. ಆದ್ರೆ ಅವರು ಕಾಲೇಜು ವಿದ್ಯಾರ್ಥಿಗಳು. ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳಬೇಕು. ಹೀಗಾಗಿ ಅವರೇ ಬುದ್ದಿವಂತರಾಗಬೇಕು ಎಂದರು.