ರೌಡಿ ಶೀಟರ್‌ನಿಂದ 1423 ಜನರಿಗೆ ಮುಕ್ತಿ 

ಭದ್ರಾವತಿ : ಅವರೆಲ್ಲಾ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ರೌಡಿ ಶೀಟರ್ ಅಂತ ಕರೆಸಿಕೊಳ್ತಾ ಇದ್ರು. ಪೊಲೀಸ್ ಠಾಣೆಗೆ ಹೋಗಿ ಹಾಜರಾತಿ ಕೊಡಬೇಕಾಗಿತ್ತು. ಕರೆದಾಗ ಹೋಗಬೇಕಾಗಿತ್ತು. ಅವರಿಗೂ ಇರಿಸುಮುರಿಸು ಉಂಟಾಗ್ತಾ ಇತ್ತು. ಅಂತಹ ರೌಡಿ ಶೀಟರ್‌ಗಳು ಈಗ ಸುಧಾರಣೆಯಾಗಿದ್ದಾರೆ. ಒಳ್ಳೆಯ ಮಾರ್ಗದಲ್ಲಿ ಬದುಕ್ತಾ ಇದಾರೆ. ಅಂತಹ ರೌಡಿ ಶೀಟರ್‌ಗಳಿಗೆ ತಾತ್ಕಾಲಿಕವಾಗಿ ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ.

ಭದ್ರಾವತಿಯಲ್ಲಿ ಹಳೇ ರೌಡಿ ಶೀಟರ್‌ಗಳನ್ನು ಕರೆಸಿ, ಅವರ ಜೊತೆ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರು ಮಾತುಕತೆ ನಡೆಸಿದರು. ಇದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ತಾವು ರೌಡಿ ಶೀಟರ್ ಆಗಿ ಅನುಭವಿಸಿದ ನೋವುಗಳನ್ನು ಕೆಲವರು ತೋಡಿಕೊಂಡರು. ಹಲವಾರು ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ತಿಳುವಳಿಕೆ ನೀಡಿ, ತಾತ್ಕಾಲಿಕವಾಗಿ ರೌಡಿ ಶೀಟರ್ ಪಟ್ಟಿಯಿಂದ ಮುಕ್ತಗೊಳಿಸಲಾಗಿದೆ. ಮುಂದೆ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 1423 ರೌಡಿ ಶೀಟ್‌ಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದೆ. ಸದ್ಯ 1378 ರೌಡಿ ಶೀಟರ್‌ಗಳು ಚಾಲ್ತಿಯಲ್ಲಿ ಇದ್ದಾರೆ.