ಪರೀಕ್ಷೆ ಬರೆಯದೆ ವಾಪಸ್ ಹೋದ 13 ವಿದ್ಯಾರ್ಥಿನಿಯರು 

ಶಿವಮೊಗ್ಗ : ಹಿಜಾಬ್ ಧರಿಸಿಕೊಂಡು ಬಂದಿದ್ದ 13 ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆಯದೆ ವಾಪಸ್ ಹೋದ ಘಟನೆ ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಶಾಲೆಗೆ ಆಗಮಿಸಿದ್ದಾರೆ. ಆದರೆ ಹೈಕೋರ್ಟ್ ಮಧ್ಯಂತರ ಆದೇಶದಂತೆ ಶಿಕ್ಷಕರು, ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದಿಟ್ಟು ಬನ್ನಿ ಎಂದು ಹೇಳಿದ್ದಾರೆ. ಆದರೆ ವಿದ್ಯಾರ್ಥಿನಿಯರು ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಘಟನೆಯ ಕುರಿತಾಗಿ ಮಾಹಿತಿ ಸಿಗುತ್ತಿದ್ದಂತೆ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಡಿಡಿಪಿಐ ರಮೇಶ್ ಶಾಲೆಗೆ ಬಂದು ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಗ ವಿದ್ಯಾರ್ಥಿಗಳು ತಾವು ಹಿಜಾಬ್ ತೆಗೆದು ಪರೀಕ್ಷೆ ಬರೆಯುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಕೆಲ ಸಮಯದ ನಂತರ ವಿದ್ಯಾರ್ಥಿನಿಯರು ನಾವು ಹಿಜಬ್ ಹಾಕಿಕೊಂಡೇ ಪರೀಕ್ಷೆ ಬರೆಯುವುದೆಂದು ಮತ್ತೆ ಹಠಕ್ಕೆ ಬಿದ್ದಿದ್ದಾರೆ.

ಆದರೆ ಅದಕ್ಕೆ ಶಾಲಾ ಆಡಳಿತ ಮಂಡಳಿ ಅನುಮತಿ ನೀಡಲಿಲ್ಲ. ನಂತರ ವಿದ್ಯಾರ್ಥಿನಿಯರ ಪೋಷಕರು ಶಾಲೆಗೆ ಬಂದು ಮಕ್ಕಳನ್ನ ಕರೆದುಕೊಂಡು ಹೋಗಿದ್ದಾರೆ. ಕೊನೆಗೂ ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯದೆ ವಾಪಸ್ ಆಗಿದ್ದಾರೆ.